ಸಾಣೇಹಳ್ಳಿ; ಸ್ವಾತಂತ್ರ್ಯ ದಿನಾಚರಣೆ
ಶ್ರೀಮಠದ ಶಾಲಾ ಆವರಣದಲ್ಲಿ 70ನೆಯ ಸ್ವಾತಂತ್ರ್ಯಮಹೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ, ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ಎಸ್ ಸಿದ್ಧಪ್ಪ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಬ್ರಿಟೀಷರಿಗಿಂತ ಮುಂಚೆ ನಮ್ಮ ದೇಶವನ್ನು ಅನೇಕ ಚಿಕ್ಕಪುಟ್ಟ ರಾಜರುಗಳು ತಮ್ಮ ತಮ್ಮ ಶಕ್ತಾನುಸಾರ ಆಳುತ್ತಿದ್ದರು. ವ್ಯಾಪಾರಕ್ಕೆಂದು ಬಂದ ಬ್ರಿಟೀಷರು ಒಡೆದು ಆಳುವ ನೀತಿಯ ಮೂಲಕ ಇಡೀ ದೇಶವನ್ನು ಕೆಲವೇ ವರ್ಷಗಳಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅವರ ಆಡಳಿತಾವಧಿಯಲ್ಲಿ ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು. ಎಲ್ಲೆಲ್ಲೂ ಭಯದ ವಾತಾವರಣವಿತ್ತು. ಜನಸಾಮಾನ್ಯರು ಮುಕ್ತವಾಗಿ ಹೊರಬರಲು ಹೆದರುತ್ತಿದ್ದರು. ಇಂಥ ಸಂದರ್ಭದಲ್ಲಿ ಕೆಲ ದೇಶಭಕ್ತರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬ್ರಿಟೀಷರ ವಿರುದ್ಧ ಹೋರಾಟಕ್ಕಿಳಿದು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಮುಂದೆ ಗಾಂಧೀಜಿಯವರ ನೇತೃತ್ವದಲ್ಲಿ ದೇಶದಾದ್ಯಂತ ಒಮ್ಮೆಲೆ ಚಳುವಳಿಯನ್ನು ಆರಂಭಿಸಿದರು. ಇದರಿಂದ ಅಸಹಾಯಕರಾದ ಬ್ರಿಟೀಷರು ನಮಗೆ 1947 ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ನೀಡಿದರು. ಹೀಗೆ ಸಿಕ್ಕ ಸ್ವಾತಂತ್ರ್ಯ ಇಂದು ಅನೇಕ ವಿಚಾರಗಳಲ್ಲಿ ಸಾರ್ಥಕತೆಯನ್ನು ಪಡೆದಿದೆ. ಆದರೆ ಭ್ರಷ್ಟಾಚಾರ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿ ದೇಶ ಹಿನ್ನಡೆಯನ್ನು ಅನುಭವಿಸುವಂತಾಗಿರುವುದು ದುರದೃಷ್ಟಕರ ಸಂಗತಿ. ಇದರ ನಡುವೆಯೂ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂರಂಥ ಮುತ್ಸದ್ದಿಗಳನ್ನ ಈ ದೇಶ ಕಂಡಿದೆ. ಇಂದಿನ ರಾಜಕಾರಣಿಗಳಿಗೆ ಇಂಥ ಆದರ್ಶವಾದಿಗಳು ಮಾದರಿಯಾಗಬೇಕು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಶಿವಮೂರ್ತಿ ಸ್ವಾಮೀಜಿ ಮತ್ತು ಶ್ರೀ ಪಂಡಿತಾರಾಧ್ಯ ಸ್ವಾಮಿಜಿಗಳು ನಡೆಸುತ್ತಿರುವ ಸೇವಾಕ್ಷೇತ್ರಗಳು ಸಮಾಜದ ಮುಖಂಡರಿಗೆ ಮಾದರಿಯಾಗಬೇಕು ಎಂದರು.
ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲಪ್ಪ ಮಾತನಾಡಿ ನಮ್ಮ ದೇಶ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದರೂ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಆ ಎಲ್ಲ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡುತ್ತಿಲ್ಲ. ಜನರಲ್ಲಿ ಶಿಕ್ಷಣದ ಮೂಲಕ ಮಾತ್ರ ಜಾಗೃತಿ ಮೂಡಿಸಬಹುದು ಎಂದು ನಂಬಿರುವ ಸರಕಾರಗಳು ಶಿಕ್ಷಣಕ್ಕೆ ಸಾಕಷ್ಟು ಹಣವನ್ನು ಮೀಸಲಿಟ್ಟು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಜನರಿಗೆ ಸರಕಾರಿ ನೌಕರಿ ಬೇಕು, ಸೌಲಭ್ಯಗಳು ಬೇಕು ಆದರೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾತ್ರ ಬೇಡವಾಗಿರುವುದು ವಿಚಿತ್ರ ಸಂಗತಿಯಾಗಿದೆ. ಸ್ವಾತಂತ್ರ್ಯ ಮಹೋತ್ಸವದ ಆಚರಣೆ ಕೇವಲ ಕೆಲವೇ ವರ್ಗದ ನೌಕರರಿಗೆ, ಇಲಾಖೆಗಳಿಗೆ ಮಾತ್ರ ಸೀಮಿತವಾಗಿದೆ. ಪ್ರತಿ ಮನೆ ಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯನ್ನು ಹಬ್ಬಹರಿದಿನಗಳಂತೆ ಆಚರಿಸಬೇಕು. ಇನ್ನೊಬ್ಬರಿಗೆ ತೊಂದರೆಕೊಡದೆ ತಮ್ಮ ತಮ್ಮ ಕೆಲಸಗಳನ್ನು ಜವಾಬ್ದಾರಿಯಿಂದ, ಆತ್ಮಸಾಕ್ಷಿಗೆ ಅನುಗುಣವಾಗಿ ಮಾಡುವುದೆ ದೇಶಸೇವೆ. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದಿರುವುದು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ರಂಗಕರ್ಮಿ ಕೆ ಎಸ್ ಡಿ ಎಲ್ ಚಂದ್ರು ಮತ್ತು ರಂಗಶಾಲೆಯ ಪ್ರಾಚಾರ್ಯ ಜಗದೀಶ್, ಅಧ್ಯಾಪಕ ಎಸ್ ಓ ಷಣ್ಮುಖಪ್ಪ, ವಿದ್ಯಾರ್ಥಿಗಳಾದ ಡಿ ಎಸ್ ಸುಪ್ರಭೆ, ಡಿ ಎಸ್ ಶಿವಸ್ವರೂಪ, ಹೆಚ್ ಕವನ, ಹೆಚ್ ಬಿ ರಕ್ಷಿತಾ, ಸಿ ಆರ್ ಮೇಘಶ್ರೀ, ಚೈತ್ರಶ್ರೀ, ಗ್ರೀಷ್ಮಾ ಸ್ವಾತಂತ್ರ್ಯೋತ್ಸವ, ಅದರ ಮಹತ್ವ, ಜವಾಬ್ದಾರಿ, ಕರ್ತವ್ಯಗಳ ಕುರಿತಂತೆ ಕನ್ನಡ, ಹಿಂದಿ, ಇಂಗ್ಲೀಷಿನಲ್ಲಿ ಭಾಷಣ ಮಾಡಿದರು.
ವರ್ಷಾ, ಎಸ್ ಜೆ ಲಿಖಿತ, ಡಿ ಸುಪ್ರಿತಾ, ಎಂ ಎಸ್ ದೀಪಾ, ದರ್ಶನ್, ಮಂಜುಳಾ, ಎನ್ ಪಿ ಪವಿತ್ರಾ, ರಕ್ಷಿತಾ ಮತ್ತು ಸಂಗಡಿಗರು ದೇಶಭಕ್ತಿಗೀತೆಗಳನ್ನು ಹಾಡಿದರು. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು `ಮಾ ತುಝೆ ಸಲಾಂ’ ಗೀತೆಗೆ ಆಕರ್ಷಕ ಸಾಮೂಹಿಕ ನೃತ್ಯರೂಪಕ ನೀಡಿದರು. ವದ್ಯಾರ್ಥಿಗಳಾದ ಸಂಜನ ಸ್ವಾಗತಿಸಿದರೆ, ಶರಣ್ ಪಾಟೀಲ್ ವಂದಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.
ಧ್ವಜಾರೋಹಣಕ್ಕೂ ಮುನ್ನ ಸಾಣೇಹಳ್ಳಿಯ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲ ನಡೆಸಿದರು. ಗ್ರಾಮಸ್ಥರು ಬೀದಿಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳನ್ನು ಕಟ್ಟಿ, ರಂಗೋಲಿಯಿಟ್ಟು ಮಕ್ಕಳನ್ನು ಸ್ವಾಗತಿಸಿದರು. ರಂಗಶಾಲೆ, ಶಿವಸಂಚಾರ, ಲೋಕಸಂಚಾರದ ಕಲಾವಿದರು, ಶಾಲಾ ಕಾಲೇಜಿನ ನೌಕರರು, ಪೋಷಕರು, ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.